ಗ್ರ್ಯಾಕಸ್ -
ಪ್ರಾಚೀನ ರೋಮಿನಲ್ಲಿ ಸೆಂಪ್ರೊನಿಯಸ್ ಕುಲಕ್ಕೆ ಸೇರಿದ ಒಂದು ಮನೆತನದ ಹೆಸರು. ಈ ಮನೆತನದ ಟೈಬೀರಿಯಸ್ ಮತ್ತು ಗೇಯಸ್ ಎಂಬ ಸೋದರರು ಪ್ರಸಿದ್ಧ ರಾಜಕಾರಣಿಗಳೂ ಸುಧಾರಕರೂ ಆಗಿದ್ದರು.

ಟೈಬೀರಿಯಸ್ ಗ್ರ್ಯಾಕಸ್ : ಕ್ರಿ.ಪೂ 163 - 133. ಇವನನ್ನೂ ಇವನ ಸೋದರ ಗೇಯಸನನ್ನೂ ಇವರ ತಾಯಿ ಕಾರ್ನೀಲಿಯಳೇ ಬೆಳೆಸಿ ಮುಂದೆ ತಂದಳು. ಫಿನೀಷಿಯನರ ವಿರುದ್ಧ ನಡೆದ ಕೊನೆಯ ಪ್ಯೂನಿಕ್ ಯುದ್ಧದಲ್ಲಿ (ಕ್ರಿ.ಪೂ. 147) ಈತ ಭಾಗವಹಿಸಿದ. ಕ್ರಮೇಣ ಅನೇಕ ಸರ್ಕಾರಿ ಹುದ್ದೆಗಳಲ್ಲಿದ್ದು ಕೊನೆಗೆ ಟ್ರಿಬ್ಯೂನ್ ಎಂಬ ಅಧಿಕಾರಿಯಾದ (ಕ್ರಿ.ಪೂ. 133). ಇವನು ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಅನೇಕ ತೀವ್ರಗಾಮಿ ಯೋಜನೆಗಳನ್ನು ಪ್ರಚಾರದಲ್ಲಿ ತಂದ. ಶ್ರೀಮಂತರಿಗೆ ಸೇರಿದ ದೊಡ್ಡ ಜಮೀನುಗಳನ್ನು ರೈತರಿಗೆ ಹಂಚಿದ. ರೋಮನರನ್ನು ಮತ್ತೆ ಸಾಗುವಳಿಗೆ ಹಚ್ಚಿ ಅವರನ್ನು ಉತ್ತಮ ಸ್ಥಿತಿಗೆ ತರಬೇಕೆಂಬುದು ಇವನ ಒಂದು ಉದ್ದೇಶ. ರೋಮನರ ಪೌರುಷ ಕುಂದುತ್ತಿದ್ದದ್ದು ಇವನನ್ನು ಚಿಂತೆಗೆ ಈಡುಮಾಡಿತ್ತು. ಇವನ ಕ್ರಮಗಳನ್ನು ಒಪ್ಪದಿದ್ದ ಬಲಿಷ್ಠ ಸೆನೇಟು ಇವನ ವಿರುದ್ಧ ಒಳಸಂಚು ನಡೆಸಿತು. ಮರುವರ್ಷ ಟ್ರಿಬ್ಯೂನನ ಆಯ್ಕೆಯ ಸಮಯದಲ್ಲಿ ಸಂಭವಿಸಿದ ದಂಗೆಯಲ್ಲಿ ಇವನ ಕೊಲೆಯಾಯಿತು.

ಗೇಯಸ್ ಗ್ರ್ಯಾಕಸ್ : ಕ್ರಿ.ಪೂ. 153 - 121 . ಟೈಬೀರಿಯಸನ ಸೋದರ. ಶ್ರೇಷ್ಠ ರಾಜಕಾರಣಿ. ಉತ್ತಮ ವಾಗ್ಮಿ. ತನ್ನ ಸೋದರನಿಂದ ಪ್ರಾರಂಭವಾದ ಕಾರ್ಯವನ್ನು ಪೂರ್ಣಗೊಳಿಸುವ ಉದ್ದೇಶದಿಂದ ರಾಜಕೀಯವನ್ನು ಪ್ರವೇಶಿಸಿದ. ಕ್ರಿಪೂ. 123ರಲ್ಲಿ ಟ್ರಿಬ್ಯೂನನಾಗಿ ಆಯ್ಕೆಹೊಂದಿದ. ಸರ್ಕಾರದ ಲೋಪದೋಷಗಳನ್ನು ತಿದ್ದುವ ಮತ್ತು ಜನತೆಯ ಕಲ್ಯಾಣದ ಸಲುವಾಗಿ ಅನೇಕ ಕ್ರಮಗಳನ್ನು ಕೈಗೊಂಡ. ಮರುವರ್ಷವೂ ಟ್ರಿಬ್ಯೂನನಾಗಿ ಆಯ್ಕೆಹೊಂದಿದಾಗ ರೋಮ್ ಪೌರತ್ವವನ್ನು ಇಟಲಿಯ ಮಿತ್ರಗುಂಪುಗಳ ಜನರಿಗೆ ಕೊಡುವ ಯೋಜನೆಯನ್ನು ತಯಾರಿಸಿದ. ಇದರಿಂದ ಸೆನೇಟಿನ ಕೋಪ ಅಧಿಕವಾಯಿತು.ಅದರ ಒಳಸಂಚಿನಿಂದಾಗಿ ಗೇಯಸ್ ಗ್ರ್ಯಾಕಸ್ ದಂಗೆಯೊಂದರಲ್ಲಿ ಸಿಕ್ಕಿ ಮರಣ ಹೊಂದಿದ.						(ಕೆ.ಪಿ.ಎಸ್‍ಯು.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ